ಬಂಡವಾಳವಾದಿ ವ್ಯವಸ್ಥೆ- 
	ಊಳಿಗಮಾನ್ಯ ವ್ಯವಸ್ಥೆ ಒಡೆದು ಹೋಗಿ, ಸಮಾಜವಾದಿ ವ್ಯವಸ್ಥೆ ಬಾರದಿರುವ ದೇಶಗಳಲ್ಲಿ ಜಾರಿಯಲ್ಲಿರುವ ಆರ್ಥಿಕ ವ್ಯವಸ್ಥೆ (ಕ್ಯಾಪಿಟಿಲಿಸಮ್). ಬಂಡವಾಳವಾದ ಎಂಬ ಪ್ರಯೋಗ ಮೊದಲು ಬಳಕೆಗೆ ಬಂದದ್ದು 19ನೆಯ ಶತಮಾನದಿಂದ ಈಚೆಗೆ. ಇದನ್ನು ಮೊದಲು ಬಳಸಿದವರು ಈ ವ್ಯವಸ್ಥೆಯ ವಿರೋಧಿಗಳಾದ ಸಮಾಜವಾದಿಗಳು. 18ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯ ಫಲವಾಗಿ ಉತ್ಪಾದನ ಕಾರ್ಯದಲ್ಲಿ ಬಂಡವಾಳದ ಪ್ರಾಮುಖ್ಯ ವಿಶೇಷವಾಗಿ ಹೆಚ್ಚಿತ್ತು. ಬಂಡವಾಳವಾದಿ ಆರ್ಥಿಕ ವ್ಯವಸ್ಥೆ ಬೆಳೆಯಿತು. ಇದಕ್ಕೆ ಸ್ವತಂತ್ರ ಆರ್ಥಿಕ ವ್ಯವಸ್ಥೆ, ಸ್ಪರ್ಧೆಯ ಆರ್ಥಿಕ ವ್ಯವಸ್ಥೆ, ಬೆಲೆಯ ಆರ್ಥಿಕ ವ್ಯವಸ್ಥೆ ಎಂಬ ಹೆಸರುಗಳು ಇವೆ. ಬಂಡವಾಳವಾದಿ ವ್ಯವಸ್ಥೆಯಲ್ಲಿ ಖಾಸಗಿ ವ್ಯಕ್ತಿಗಳು ಅಥವಾ ಅವರಿಂದ ಸ್ಥಾಪಿಸಲ್ಪಟ್ಟ ಖಾಸಗಿ ಸಂಸ್ಥೆಗಳು ಸ್ವಂತ ಲಾಭ ಗಳಿಕೆಯ ಉದ್ದೇಶದಿಂದ ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮ ತಮ್ಮ ಬಂಡವಾಳವನ್ನು ಹೂಡುವ ವಾಡಿಕೆಯಿರುತ್ತದೆ.

	ಬಂಡವಾಳವಾದಿ ವ್ಯವಸ್ಥೆಯ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದಿದೆ. 19ನೆಯ ಶತಮಾನದಲ್ಲಿ ಬಂಡವಾಳವಾದಿ ವ್ಯವಸ್ಥೆ ಅನಿರ್ಬಂಧಿತ ಆರ್ಥಿಕ ವ್ಯವಸ್ಥೆಯಾದರೆ, 20ನೆಯ ಶತಮಾನದಲ್ಲಿನ ಬಂಡವಾಳವಾದಿ ವ್ಯವಸ್ಥೆ ನಿರ್ಬಂಧಿತ ವ್ಯವಸ್ಥೆಯಾಗಿದೆ. ಇದು ದೇಶದಿಂದ ದೇಶಕ್ಕೆ ವ್ಯತ್ಯಾಸ ಹೊಂದುತ್ತದೆ. ಅಲ್ಲದೆ ಸಾಮಾನ್ಯವಾಗಿ ಬಂಡವಾಳ ವ್ಯವಸ್ಥೆ ಯೋಜನಾರಹಿತವಾಗಿದ್ದರೂ ಅಮೆರಿಕದಲ್ಲಿ ಅಧ್ಯಕ್ಷ ರೂಸ್‍ವೆಲ್ಟ್ ಜಾರಿಗೆ ತಂದ ಹೊಸ ವ್ಯವಸ್ಥೆ. ನಾಟ್ಸಿಜರ್ಮನಿಯಲ್ಲಿ ಜಾರಿಗೆ ತರಲಾಗಿದ್ದ ಆರ್ಥಿಕ ವ್ಯವಸ್ಥೆ ಇವು ಬಂಡವಾಳವಾದಿ ವ್ಯವಸ್ಥೆಯ ಚೌಕಟ್ಟಿನಲ್ಲೇ ಯೋಜನಾ ವಿಧಾನವನ್ನನುಸರಿಸಿದ ಪ್ರಯೋಗಗಳಾಗಿದ್ದುವು. ಹೀಗೆ ಬಂಡವಾಳವಾದಿ ವ್ಯವಸ್ಥೆ ನಾನಾ ರೂಪಗಳನ್ನು ತಾಳಿದ್ದುಂಟು. ಆದರೆ ಅದು ಶುದ್ಧ ಬಂಡವಾಳವಾದಿ ವ್ಯವಸ್ಥೆಯಾಗಿ ಎಂದೂ ಎಲ್ಲೂ ಇರಲಿಲ್ಲವೆನ್ನಬಹುದು.

	ಸಾಮಾನ್ಯ ಲಕ್ಷಣಗಳು: ಬಂಡವಾಳವಾದಿ ವ್ಯವಸ್ಥೆ ಯಾವ ರೂಪದಲ್ಲಿದ್ದರೂ ಅದರಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ. 1. ಆರ್ಥಿಕ ಸ್ವಾತಂತ್ರ್ಯವೇ ಬಂಡವಾಳವಾದಿ ವ್ಯವಸ್ಥೆಯ ಮುಖ್ಯ ಲಕ್ಷಣ. ಯಾರು ಯಾವ ಆರ್ಥಿಕ ಚಟುವಟಿಕೆಯಲ್ಲಾದರೂ ತೊಡಗಬಹುದು. ಇದಕ್ಕೆ ಸರ್ಕಾರದ ಅಥವಾ ಇನ್ನಾರ ಅಡ್ಡಿಯೂ ಇರುವುದಿಲ್ಲ. 2. ಬಂಡವಾಳವಾದಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಿತರಕ್ಷಣೆಯಲ್ಲಿ ಮಾತ್ರ ಆಸಕ್ತಿ ಹೊಂದಿರುತ್ತಾನೆ. ಇತರರ ಕಷ್ಟನಷ್ಟಗಳ ಕಡೆಗೆ ಅವನ ಗಮನ ಇರುವುದಿಲ್ಲ. ತನ್ನ ಪಾಡು ತನ್ನದು. ಹಿಂದಿರುವವನು ಹಾಳಾಗಲಿ ಎಂಬುದು ಅವನ ಸಾಮಾನ್ಯ ನೀತಿಯಾಗಿರುತ್ತದೆ. 3. ಸ್ವಂತ ಲಾಭ ಗಳಿಕೆ, ಖಾಸಗಿ ಆಸ್ತಿ ಸಂಗ್ರಹಣೆ-ಇವಕ್ಕೆ ಬಂಡವಾಳವಾದಿ ವ್ಯವಸ್ಥೆಯಲ್ಲು ಅನಿರ್ಬಂಧ ಅವಕಾಶವಿರುತ್ತದೆ. ಆದ್ದರಿಂದ ಪ್ರತಿಯೊಬ್ಬನೂ ತನಗೆ ಅತ್ಯಂತ ಲಾಭದಾಯಕವೆನಿಸುವ ಉದ್ಯಮಗಳಲ್ಲಿ ಮಾತ್ರ ಆಸಕ್ತಿ ವಹಿಸುತ್ತಾರೆ. 4. ಉದ್ಯಮ ಸ್ವಾತಂತ್ರ್ಯ ಮತ್ತು ಲಾಭದ ಅಪೇಕ್ಷೆಯ ಪರಿಣಾಮವಾಗಿ ಆರ್ಥಿಕ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಇರುತ್ತದೆ. ಈ ಸ್ಪರ್ಧೆಯಲ್ಲಿ ಅತ್ಯಂತ ದಕ್ಷರು ಮಾತ್ರ ಉಳಿಯುತ್ತಾರೆ. ಅಸಮರ್ಥರು ನಷ್ಟ ಹೊಂದಿ ನಾಶವಾಗುತ್ತಾರೆ. ಈ ರೀತಿ ಅಸಮರ್ಥರು ಹೊರದೂಡಲ್ಪಟ್ಟರೆ ಅದು ಸಮಾಜಕ್ಕೆ ಹಿತವೆಂಬುದು ಬಂಡವಾಳಿಗರ ನಂಬಿಕೆ. 5. ಹೀಗೆ ಲಾಭದ ಆಕರ್ಷಣೆ, ಸ್ಪರ್ಧೆಯ ಭಯ ಇವುಗಳಿಂದಾಗಿ ಉದ್ಯಮಗಳು ಅತ್ಯಂತ ದಕ್ಷತೆಯಿಂದ ನಡೆಯುವುದು ಅಗತ್ಯವಾಗುತ್ತದೆ. ಇದರಿಂದ ಇಡೀ ಆರ್ಥಿಕ ರಂಗವೇ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಲು ಸಹಾಯಕವಾಗುತ್ತದೆ. 6. ಇಷ್ಟಾದರೂ ಬಂಡವಾಳವಾದಿ ವ್ಯವಸ್ಥೆಯಲ್ಲಿ ಆರ್ಥಿಕ ಜೀವನದ ಮೇಲೆ ಸರ್ಕಾರದ ನಿಯಂತ್ರಣ ಅಥವಾ ನಿಬಂಧನೆ ಇರುವುದಿಲ್ಲ. ಆರ್ಥಿಕ ಜೀವನ ತಾನೇ ತಾನಾಗಿ ವ್ಯವಸ್ಥೆಗೊಳ್ಳುತ್ತದೆ. ಆಡಂ ಸ್ಮಿತ್ ಹೇಳಿರುವಂತೆ, ಯಾವುದೋ ಅಗೋಚರ ಕೈವಾಡ ಆರ್ಥಿಕ ಜೀವನದ ಸಮಸ್ಥಿತಿಯನ್ನು ಕಾಪಾಡುತ್ತದೆ. ಒಂದು ವೇಳೆ ಏರುಪೇರುಗಳುಂಟಾದರೂ ಬೇಡಿಕೆ ಮತ್ತು ಪೂರೈಕೆಗಳ ವ್ಯತ್ಯಾಸದಿಂದ ಶೀಘ್ರದಲ್ಲೇ ಬೆಲೆ ತಂತ್ರದ ಮೂಲಕ ವ್ಯವಸ್ಥೆ ತಾನಾಗಿಯೇ ನೇರ್ಪುಗೊಂಡು ಪುನಃ ಸಮತೋಲ ಏರ್ಪಡುತ್ತದೆ. ಈ ಬಗೆಯ ಹೊಂದಾಣಿಕೆಯ ಫಲವಾಗಿ ಬಂಡವಾಳವಾದಿ ವ್ಯವಸ್ಥೆಯಲ್ಲಿ ಪೂರ್ಣೋದ್ಯೋಗ ಪರಿಸ್ಥಿತಿ ತಾನಾಗಿಯೇ ಉಂಟಾಗುತ್ತದೆ. 7. ಬಂಡವಾಳವಾದಿ ವ್ಯವಸ್ಥೆಯಲ್ಲಿ ಉದ್ಯಮ ಸ್ವಾತಂತ್ರ್ಯದಂತೆಯೇ ಉದ್ಯೋಗದ ಆಯ್ಕೆಯ ಸ್ವಾತಂತ್ರ್ಯವೂ ಇರುತ್ತದೆ. ಅಂದರೆ, ಉತ್ಪಾದನಾಂಗಗಳು ಅತ್ಯಂತ ಹೆಚ್ಚಿನ ಪ್ರತಿಫಲವನ್ನು ಅರಸುತ್ತ ಒಂದು ಉದ್ಯೋಗದಿಂದ ಇನ್ನೊಂದಕ್ಕೆ ವರ್ಗ ಹೊಂದುವ ಸ್ವಾತಂತ್ರ್ಯವನ್ನು ಪಡೆದಿರುತ್ತವೆ. 8. ಅಲ್ಲದೆ ಬಂಡವಾಳವಾದಿ ವ್ಯವಸ್ಥೆ ಗ್ರಾಹಕನ ಸಾರ್ವಭೌಮತ್ವವನ್ನು ಒಪ್ಪುತ್ತದೆ. ಅಂದರೆ ಪೇಟೆಯಲ್ಲಿ ಬಿಕರಿಗಿರುವ ಸರಕುಗಳನ್ನು ಹೇಳಿದ ಬೆಲೆಗೆ ಕೊಳ್ಳುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವನ್ನೂ ಗ್ರಾಹಕ ಪಡೆದಿರುತ್ತಾನೆ. ಇದರಿಂದ ತೀವ್ರ ಸ್ಪರ್ಧೆಯಿರುವ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೇಕಾದ ಪದಾರ್ಥಗಳು ಅತ್ಯಂತ ಕಡಿಮೆ ಬೆಲೆಗೆ, ಅಂದರೆ ಉತ್ಪಾದನೆ ವೆಚ್ಚಕ್ಕೆ ಸಮನಾಗುವ ಬೆಲೆಗೆ, ದೊರಕುತ್ತವೆ. 9. ಬಂಡವಾಳವಾದಿ ವ್ಯವಸ್ಥೆಯಲ್ಲಿ ಉತ್ಪಾದನ ಸಾಧನಗಳ ಮೇಲಿನ ಹತೋಟಿ ಸಂಪೂರ್ಣವಾಗಿ ಖಾಸಗಿ ಬಂಡವಾಳಗಾರರ ಕೈಯಲ್ಲಿರುತ್ತದೆ. ಕಾರ್ಮಿಕರಿಗೆ ಅವುಗಳ ಮೇಲೆ ಯಾವ ಬಗೆಯ ಹಕ್ಕೂ ಇಲ್ಲದಿರುವುದರಿಂದ, ಅವರು ಸಂಪೂರ್ಣವಾಗಿ ಬಂಡವಾಳಗಾರರ ಅಧೀನಕ್ಕೆ ಒಳಪಡುತ್ತಾರೆ. 10. ಉತ್ಪಾದನೆ ಮತ್ತು ವಿತರಣೆಯ ಮೇಲಿನ ಹತೋಟಿ ಸಂಪೂರ್ಣವಾಗಿ ಖಾಸಗಿ ಉದ್ಯಮಿಗಳಿಗೇ ಸೇರಿರುವುದು ಬಂಡವಾಳವಾದಿ ವ್ಯವಸ್ಥೆಯ ಇನ್ನೊಂದು ಲಕ್ಷಣ. ಬಂಡವಾಳಗಾರರು ಈ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಉತ್ಪಾದಿತ ಸಂಪತ್ತಿನ ಬಹು ಭಾಗವನ್ನು ತಮ್ಮ ಲಾಭವಾಗಿ ತೆಗೆದುಕೊಂಡು ಅತ್ಯಲ್ಪ ಭಾಗವನ್ನು ಮಾತ್ರ ಕೂಲಿಯೆಂದು ಕಾರ್ಮಿಕರಿಗೆ ಕೊಡುವ ಪ್ರವೃತ್ತಿ ಬೆಳೆಯುತ್ತದೆ. ಹೀಗೆ ಲಾಭಸಂಗ್ರಹಣೆ ಹೆಚ್ಚಿದಷ್ಟೂ ಆರ್ಥಿಕ ಜೀವನದ ಮೇಲೆ ಬಂಡವಾಳಿಗರ ಹಿಡಿತವೂ ಹೆಚ್ಚುತ್ತದೆ. ಇದರಿಂದ ಶೋಷಣೆಗೊಳಗಾದ ಕಾರ್ಮಿಕರ ಅಸಹನೆ ಮತ್ತು ದ್ವೇಷ ಹೆಚ್ಚಿ ನಿರಂತರ ವರ್ಗಕಲಹಕ್ಕೆ ಎಡೆ ಉಂಟಾಗುತ್ತದೆ.

ಪ್ರಯೋಜನಗಳು: ಬಂಡವಾಳವಾದಿ ವ್ಯವಸ್ಥೆಯಿಂದ ಅನೇಕ ಪ್ರಯೋಜನಗಳಾಗಿವೆಯೆನ್ನಲಾಗಿದೆ. ಅವುಗಳಲ್ಲಿ ಮುಖ್ಯವಾದವು ಇವು: 1. ಅದರಿಂದ ಪ್ರತಿಯೊಬ್ಬ ವ್ಯಕ್ತಿಗೂ ತನ್ನಿಚ್ಛೆ ಬಂದಂತೆ ಆರ್ಥಿಕ ಚಟುವಟಿಕೆಗಳನ್ನು ನಡೆಸುವ ಸ್ವಾತಂತ್ರ್ಯ ದೊರಕುತ್ತದೆ. 2. ದಕ್ಷತೆಗೆ ತಕ್ಕ ಪ್ರತಿಫಲ ದೊರೆಯುವುದೆಂಬ ಭರವಸೆ ಮತ್ತು ಬಂದ ಪ್ರತಿಫಲವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಳ್ಳಬಹುದೆಂಬ ಆಕರ್ಷಣೆ ಇರುವುದರಿಂದ, ಬಂಡವಾಳವಾದಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕೆಲಸಕಾರ್ಯಗಳನ್ನು ಅತ್ಯಂತ ಆಸಕ್ತಿಯಿಂದಲೂ ದಕ್ಷತೆಯಿಂದಲೂ ಮಾಡುತ್ತಾನೆ. 3. ದಕ್ಷತೆ ಹೆಚ್ಚಿದಷ್ಟೂ ಉತ್ಪಾದನೆ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ಸಂಪತ್ತು ಅತ್ಯಧಿಕ ಪರಿಮಾಣದಲ್ಲಿ ಉತ್ಪಾದನೆಯಾಗುವುದಲ್ಲದೆ, ಪದಾರ್ಥಗಳ ಬೆಲೆ ಕಡಿಮೆಯಾಗಿ ಜನಸಾಮಾನ್ಯರು ತಮ್ಮ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಾಗುತ್ತದೆ. 4. ಗ್ರಾಹಕರು ತಮ್ಮ ವೈಯಕ್ತಿಕ ಅಭಿರುಚಿ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪದಾರ್ಥಗಳನ್ನು ಕೊಳ್ಳಬಹುದು. 5. ಆರ್ಥಿಕ ಕ್ಷೇತ್ರದಲ್ಲಿರುವ ಅನಿರ್ಬಂಧ ಸ್ಪರ್ಧೆ ಮತ್ತು ಉದ್ಯಮ ಕಂಟಕಗಳ ಕಾರಣದಿಂದ ಉದ್ಯಮಿಗಳು ತಮ್ಮ ಕೆಲಸಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ. ಇದರಿಂದ ಉತ್ಪಾದನ ಸಾಮಗ್ರಿಗಳು ವ್ಯರ್ಥವಾಗಲು ಅವಕಾಶ ಇರುವುದಿಲ್ಲ. 6. ಉದ್ಯಮಿಗಳು ಏನಾದರೂ ತಪ್ಪು ತೀರ್ಮಾನಗಳನ್ನು ಕೈಗೊಂಡರೆ ಅದರಿಂದ ಉಂಟಾಗುವ ನಷ್ಟವನ್ನು ಅವರೇ ಅನುಭವಿಸಬೇಕಾಗುವುದೇ ವಿನಾ ಸಮಾಜದ ಮೇಲೆ ಆ ಹೊರೆ ಬೀಳುವುದಿಲ್ಲ. 7. ಈ ಎಲ್ಲ ಪ್ರಯೋಜನಗಳನ್ನು ನಿರ್ಬಂಧರಹಿತ ವಾತಾವರಣದಲ್ಲಿ ಪಡೆಯಲು ಬಂಡವಾಳವಾಗಿ ವ್ಯವಸ್ಥೆಯಲ್ಲಿ ಅವಕಾಶ ಇರುತ್ತದೆ. ಆದ್ದರಿಂದ ಸ್ವಾತಂತ್ರ್ಯಾಪೇಕ್ಷಿಯಾದ ಮಾನವನ ಸಹಜ ಮನೋವೃತ್ತಿಗೆ ಬಂಡವಾಳವಾಗಿ ವ್ಯವಸ್ಥೆ ಸರಿಹೊಂದುತ್ತದೆ. ಬಂಡವಾಳವಾದಿ ವ್ಯವಸ್ಥೆಯ ಈ ಎಲ್ಲ ಗುಣಗಳನ್ನು ತಾತ್ತ್ವಿಕವಾಗಿ ಒಪ್ಪಬಹುದಾದರೂ, ವಾಸ್ತವವಾಗಿ ಇವುಗಳಲ್ಲಿ ಹಲವು ಕಾಣ ಬರುವುದಿಲ್ಲ. ಅದಕ್ಕೆ ಪ್ರತಿಯಾಗಿ ಬಂಡವಾಳವಾದಿ ವ್ಯವಸ್ಥೆಯ ಅನೇಕ ದೋಷಗಳು ಕಂಡುಬಂದಿವೆ. ಆದ್ದರಿಂದ ಬಂಡವಾಳವಾದಿ ವ್ಯವಸ್ಥೆಗೆ ತೀವ್ರ ವಿರೋಧ ಉಂಟಾಗಿದೆ.

ದೋಷಗಳು: ಬಂಡವಾಳವಾದಿ ವ್ಯವಸ್ಥೆಯು ಮುಖ್ಯ ದೋಷಗಳು ಇವು: 1. ಬಂಡವಾಳವಾದಿ ವ್ಯವಸ್ಥೆಯಲ್ಲಿರುವ ಆರ್ಥಿಕ ಸ್ವಾತಂತ್ರ್ಯ ಬಂಡವಾಳಿಗರಿಗೆ ಮಾತ್ರ. ಅವರ ಆಧೀನದಲ್ಲಿರುವ ಕಾರ್ಮಿಕರು ಮತ್ತು ಜನಸಾಮಾನ್ಯರು ಸ್ವಾತಂತ್ರ್ಯಕ್ಕೆ ಪ್ರತಿಯಾಗಿ ನಿರಂತರ ಶೋಷಣೆಗೆ ಒಳಗಾಗುತ್ತಾರೆ. 2. ಮಿತಿ ಮೀರಿದ ಸ್ಪರ್ಧೆಯಿಂದ ಸಣ್ಣ ಗಾತ್ರದ ಉದ್ಯಮಗಳೆಲ್ಲ ನಾಶ ಹೊಂದಿ ಬೃಹದುದ್ಯಮಗಳು ಮಾತ್ರ ಉಳಿಯುತ್ತವೆ. ಇದರಿಂದ ತೋರಿಕೆಗೆ ಸ್ಪರ್ಧೆಯಿದ್ದರೂ ವಾಸ್ತವವಾಗಿ ಬೃಹದುದ್ಯಮಗಳ ಏಕಸ್ವಾಮ್ಯವನ್ನು ಎದುರಿಸಬೇಕಾಗುತ್ತದೆ. ಅಮೆರಿಕದ ಟ್ರಸ್ಟ್‍ಗಳು ಮತ್ತು ಜರ್ಮನಿಯ ಕಾರ್ಟೆಲ್‍ಗಳು ಇದಕ್ಕೆ ನಿದರ್ಶನ. 3. ಇಂಥ ಬೃಹದುದ್ಯಮಗಳಿಗೆ ತೀವ್ರ ಸ್ಪರ್ಧೆ ಉಂಟಾದಾಗ ಸಂಪನ್ಮೂಲಗಳು ಬಹಳವಾಗಿ ವ್ಯರ್ಥವಾಗುತ್ತವೆ. ಜಾಹೀರಾತು ಮತ್ತು ಇತರ ವಿಕ್ರಯ ವಿಸ್ತರಣ ಕಾರ್ಯಗಳಿಗಾಗಿ ಅಪಾರ ಹಣ ವೆಚ್ಚವಾಗುತ್ತದೆ. ಇದರ ಹೊರೆ ಗ್ರಾಹಕರ ಮೇಲೆಯೂ ಬೀಳುತ್ತದೆ. 4. ಉತ್ಪಾದನಾಂಗಗಳಿಗೆ ಉದ್ಯೋಗ ಸ್ವಾತಂತ್ರ್ಯವಿದೆಯೆಂದರೂ, ವಾಸ್ತವವಾಗಿ ಅವು ವರ್ಗ ಹೊಂದುವುದು ಸುಲಭವಲ್ಲ. ಇದರಿಂದ ಅನೇಕ ವೇಳೆ ನಿರುದ್ಯೋಗ, ಅಲ್ಪವೇತನ ಮುಂತಾದ ಪರಿಸ್ಥಿತಿಗಳನ್ನೆದುರಿಸಬೇಕಾಗಿ ಬರುತ್ತದೆ. 5. ಬಂಡವಾಳವಾದಿ ವ್ಯವಸ್ಥೆಯಲ್ಲಿ ಲಾಭ ಗಳಿಕೆಯೇ ಪರಮ ಧ್ಯೇಯವಾದುದರಿಂದ ಉತ್ಪಾದನಾಂಗಗಳು ಸಮಾಜಕ್ಕೆ ಅತ್ಯಂತ ಉಪಯುಕ್ತವೆನಿಸುವ ಮಾರ್ಗಗಳಲ್ಲೇ ಬಳಕೆಯಾಗುವುದೆಂಬ ನಂಬಿಕೆಯಿಲ್ಲ. ವಾಸ್ತವವಾಗಿ ಬಂಡವಾಳವಾದಿ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಜೀವನಾವಶ್ಯಕ ವಸ್ತುಗಳಿಗಿಂತಲೂ ಐಶ್ವರ್ಯವಂತರ ಭೋಗ ಸಾಮಗ್ರಿಗಳ ಉತ್ಪಾದನೆಗೆ ಹೆಚ್ಚಿನ ಗಮನ ದೊರಕುತ್ತದೆ. 6. ಆರ್ಥಿಕ ಕ್ಷೇತ್ರದಲ್ಲಿ ಸ್ಥಿರ ಸ್ಥಿತಿ ತಾನಾಗಿಯೇ ಏರ್ಪಡುವುದೆಂದು ಹೇಳಿದರೂ, ಮತ್ತೆ ಮತ್ತೆ ಏರಿಳಿತಗಳು ಉಂಟಾಗುವ ದುಷ್ಟರಿಣಾಮಗಳು ದೀರ್ಘ ವ್ಯಾಪ್ತಿಯಾಗಿ, ಅಲ್ಲೋಲ ಕಲ್ಲೋಲವನ್ನುಂಟು ಮಾಡುತ್ತವೆ. 7. ಅನಿರ್ಬಂಧ ಲಾಭಗಳಿಕೆ ಮತ್ತು ಐಶ್ವರ್ಯ ಸಂಗ್ರಹಣೆಯ ಫಲವಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ತೀವ್ರವಾಗಿ, ಅಶಾಂತಿ ಹಬ್ಬುತ್ತದೆ. 8. ತಾತ್ತ್ವಿಕವಾಗಿ ಬಂಡವಾಳವಾದಿ ವ್ಯವಸ್ಥೆಯಲ್ಲಿ ಪೂರ್ಣೋದ್ಯೋಗ ಸ್ಥಿತಿ ಇರಬೇಕಾದರೂ, ವಾಸ್ತವವಾಗಿ ನಿರುದ್ಯೋಗ ಅಗಾಧ ಪ್ರಮಾಣದಲ್ಲಿರುತ್ತದೆ.

ಹೀಗೆ ಬಂಡವಾಳವಾದಿ ವ್ಯವಸ್ಥೆ ಅನೇಕ ದೋಷಗಳಿಂದ ಕೂಡಿದ್ದರೂ ಕೈಗಾರಿಕಾ ಕ್ರಾಂತಿಯ ಪ್ರಥಮ ಘಟ್ಟದಲ್ಲಿ ಅವು ಅಷ್ಟಾಗಿ ಗೋಚರವಾಗಲಿಲ್ಲ. ನೂತನ ಯಂತ್ರ ಕೈಗಾರಿಕೆಗಳಿಂದ ಹಿಂದೆಂದೂ ಕಾಣದಿದ್ದಷ್ಟು ಅಗಾಧ ಗಾತ್ರದಲ್ಲಿ ಸಂಪತ್ತಿನ ಉತ್ಪಾದನೆಯಾದ್ದರಿಂದ ನಿರುದ್ಯೋಗ ಮತ್ತು ದಾರಿದ್ರ್ಯ ನಿವಾರಣೆಗೆ ಶಾಶ್ವತ ಪರಿಹಾರ ದೊರಕಿತೆಂಬ ತಪ್ಪು ಭಾವನೆ ಬೆಳೆಯಿತು. ಬಂಡವಾಳವಾದಿ ವ್ಯವಸ್ಥೆಯೇ ಸರ್ವಶ್ರೇಷ್ಠ ಆರ್ಥಿಕ ಪದ್ಧತಿಯೆಂದು ಪರಿಗಣಿಸಲಾಗಿತ್ತು. 19ನೆಯ ಶತಮಾನದ ಆದಿಭಾಗವನ್ನು ಬಂಡವಾಳವಾದಿ ವ್ಯವಸ್ಥೆಯ ಸ್ವರ್ಣಯುಗವೆನ್ನಲಾಯಿತು.

ಆದರೆ ಕೈಗಾರಿಕೆಗಳ ಬೆಳವಣಿಗೆಯೊಂದಿಗೇ ಕಾರ್ಮಿಕರ ಅತಿದುಡಿಮೆ, ಶೋಷಣೆ, ಸಂಕಟಗಳೂ ಬೆಳೆದುವು. 19ನೆಯ ಶತಮಾನದ ಅಂತ್ಯದ ವೇಳೆಗೆ ಬಂಡವಾಳವಾದಿ ವ್ಯವಸ್ಥೆಯ ದೋಷಗಳು ಬಯಲಾದುವು. ಐಶ್ವರ್ಯೋತ್ಪಾದನೆ ಅಧಿಕಗೊಳ್ಳುತ್ತಿದ್ದಂತೆಯೇ ಜನ ಸಾಮಾನ್ಯರ ದಾರಿದ್ರ್ಯವೂ ಹೆಚ್ಚುತ್ತಿದ್ದ ವಿಚಿತ್ರ ಸನ್ನಿವೇಶ ವಿಚಾರವಂತರನ್ನು ಚಿಂತೆಗೆ ಈಡು ಮಾಡಿತು. ಉತ್ಪಾದನೆಗೆ ಅತ್ಯಂತ ಪ್ರಾಮುಖ್ಯ ನೀಡಿ ಅದರ ಯೋಗ್ಯ ವಿತರಣೆಯನ್ನು ನಿರ್ಲಕ್ಷಿಸಿದ್ದೂ ಐಶ್ವರ್ಯದ ಅಸಮಾನ ಹಂಚಿಕೆಗೆ ಅವಕಾಶ ಕೊಟ್ಟದ್ದೂ ಬಂಡವಾಳವಾದಿ ವ್ಯವಸ್ಥೆಯ ಮುಖ್ಯ ದೋಷಗಳೆಂಬ ತಿಳಿವಳಿಕೆ ಕಾಲಕ್ರಮದಲ್ಲಿ ಬಂತು. ಕಾರ್ಲಮಾಕ್ರ್ಸ್ ತನ್ನ ಬರಹಗಳಲ್ಲಿ ಬಂಡವಾಳವಾದಿ ವ್ಯವಸ್ಥೆಯ ದೋಷಗಳನ್ನು ಎತ್ತಿ ಹಿಡಿದು, ಕಾರ್ಮಿಕ ವರ್ಗದ ಶೋಷಣೆ ತಪ್ಪಬೇಕಾದರೆ ಬಂಡವಾಳವಾದಿ ವ್ಯವಸ್ಥೆಯ ನಿರ್ಮೂಲವಾಗುವುದು ಅನಿವಾರ್ಯವೆಂದೂ ಅದರ ಆಂತರಿಕ ವೈರುಧ್ಯಗಳಿಂದಾಗಿ, ಕಾರ್ಮಿಕ ವರ್ಗದ ಸಂಘಟನೆಯಿಂದಾಗಿ ಸಹಜವಾಗಿಯೇ ಸಮಾಜವಾದಿ ವ್ಯವಸ್ಥೆ ಏರ್ಪಡುವುದೆಂದೂ ಸಾರಿದ. ಸಮಾಜವಾದದ ಪ್ರಭಾವ ದಿನೇ ದಿನೇ ಹೆಚ್ಚಿತು.

ಹೀಗಿರುವಲ್ಲಿ ಒಂದನೆಯ ಮಹಾಯುದ್ಧದ ಅನಂತರ ವಿಶ್ವವ್ಯಾಪಿಯಾದ ಮಹಾ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಬಂಡವಾಳವಾದಿ ವ್ಯವಸ್ಥೆಯಲ್ಲಿದ್ದ ಅಲ್ಪಸ್ವಲ್ಪ ವಿಶ್ವಾಸವು ಭಂಗವಾಯಿತು. ಸಂಪದ್ಭರಿತವಾಗಿದ್ದ ಅಮೆರಿಕದಂಥ ದೇಶ ಕೂಡ ಇದ್ದಕ್ಕಿದ್ದಂತೆ ನಿಸ್ತೇಜವಾಯಿತು. ಆದ್ದರಿಂದ ಬಂಡವಾಳವಾದಿ ವ್ಯವಸ್ಥೆಗೆ ಪ್ರತಿಯಾಗಿ ಇತರ ಆರ್ಥಿಕ ಪದ್ಧತಿಗಳನ್ನು ಕುರಿತು ಯೋಚಿಸಬೇಕಾಯಿತು.

ಈ ವೇಳೆಗೆ ರಷ್ಯದಲ್ಲಿ ಬಂಡವಾಳವಾದಿ ವ್ಯವಸ್ಥೆಯನ್ನು ಉರುಳಿಸಿ ಸಮಾಜವಾದಿ ಸಮಾಜವನ್ನು ಸ್ಥಾಪಿಸಲಾಗಿತ್ತು. ಪ್ರಪಂಚದಲ್ಲಿ ಪ್ರಥಮ ಬಾರಿಗೆ ಕೇಂದ್ರೀಕೃತ ಯೋಜನಾ ಕ್ರಮವನ್ನು ಯಶಸ್ವಿಯಾಗಿ ಅನುಸರಿಸಿ, ಆವರೆಗೆ ಬಂಡವಾಳವಾದಿ ವ್ಯವಸ್ಥೆ ನಿವಾರಿಸಲು ಅಸಮರ್ಥವಾಗಿದ್ದ ನಿರುದ್ಯೋಗ, ಆರ್ಥಿಕ ಏರಿಳಿತ ಮುಂತಾದ ಸಮಸ್ಯೆಗಳನ್ನು ಪರಿಹರಿಸಿದ್ದು ಎಲ್ಲ ದೇಶಗಳ ಗಮನವನ್ನು ಸೆಳೆಯಿತು. ಆದರೆ ರಷ್ಯದ ಸಮಾಜವಾದದ ಪ್ರಯೋಗದಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿತ್ತೆಂದು ಹೇಳಲಾಗಿತ್ತು. ಬಂಡವಾಳವಾದಿ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವಲ್ಲಿ ಬಹಳ ಮಟ್ಟಿಗೆ ಯಶಸ್ವಿಯಾಗಿದ್ದ ರಷ್ಯ ಮತ್ತು ಪೂರ್ವ ಐರೋಪ್ಯ ರಾಷ್ಟ್ರಗಳಲ್ಲಿ ಇತ್ತೀಚೆಗೆ ಸಮಾಜವಾದಿ ವ್ಯವಸ್ಥೆ ಪತನಗೊಂಡದ್ದು ಒಂದು ಅನಿರೀಕ್ಷಿತ ಘಟನೆ.
ಆದ್ದರಿಂದ ಬಂಡವಾಳವಾದಿ ವ್ಯವಸ್ಥೆಯ ದೋಷಗಳನ್ನು ನಿವಾರಿಸುವುದು ಜೊತೆಗೆ ವ್ಯಕ್ತಿ ಸ್ವಾತಂತ್ರ್ಯವನ್ನೂ ರಕ್ಷಿಸುವುದು ಬಂಡವಾಳವಾದಿ ವ್ಯವಸ್ಥೆಯ ಸೂಕ್ತ ಸುಧಾರಣೆಯಿಂದ ಸಾಧ್ಯವಾಗಬಹುದೆಂಬ ಇನ್ನೊಂದು ಅಭಿಪ್ರಾಯ ಮೂಡಿತು. ಇದಕ್ಕೆ ಕೇನ್ಸ್ ಮುಂತಾದ ಅರ್ಥಶಾಸ್ತ್ರಜ್ಞರ ಬೆಂಬಲ ದೊರಕಿತು. ಯೋಗ್ಯ ರೀತಿಯಲ್ಲಿ ವ್ಯವಸ್ಥೆ ಮಾಡಿದರೆ ಪ್ರಾಯಶಃ ಬಂಡವಾಳವಾದಿ ವ್ಯವಸ್ಥೆ ಇತರ ಎಲ್ಲ ಆರ್ಥಿಕ ವ್ಯವಸ್ಥೆಗಳಿಗಿಂತ ಹೆಚ್ಚು ದಕ್ಷತೆಯಿಂದಿರುವಂತೆ ಮಾಡಬಹುದು ಎಂಬುದು ಕೇನ್ಸ್‍ನ ಅಭಿಪ್ರಾಯವಾಗಿತ್ತು.
ಸುಧಾರಿತ ಬಂಡವಾಳವಾದಿ ವ್ಯವಸ್ಥೆ ಇರುವ ದೇಶಗಳಲ್ಲಿ ಸರ್ಕಾರ ಆರ್ಥಿಕ ಜೀವನದಲ್ಲಿ ಹೆಚ್ಚು ಹೆಚ್ಚು ಪ್ರವೇಶಿಸುತ್ತದೆ, ಸಮಾಜಹಿತಕ್ಕೆ ಅವಶ್ಯವೆನಿಸುವ ಮಟ್ಟಗೆ ಮಾತ್ರ ವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸಲು ಆರೋಹಿ ವರಮಾನ ತೆರಿಗೆ ಸಂಪತ್ತಿನ ತೆರಿಗೆ ಮುಂತಾದವನ್ನು ವಿಧಿಸಲಾಗುವುದು. ಇಂಥ ತೆರಿಗೆ ನೀತಿಯಿಂದ ಶ್ರೀಮಂತರ ಹೆಚ್ಚಿನ ಸಂಪತ್ತು ಸರ್ಕಾರದ ವಶಕ್ಕೆ ಬರುತ್ತದೆ. ಇದನ್ನು ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಬಳಸಲು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ ಸುಧಾರಿತ ಬಂಡವಾಳ ವ್ಯವಸ್ಥೆಯಲ್ಲಿ ಪೂರ್ಣೋದ್ಯೋಗ ಸ್ಥಿತಿಯನ್ನೂ ಸಾಧಿಸಬಹುದೆಂದು ಆಶಿಸಲಾಗಿದೆ. ಎರಡನೆಯ ಮಹಾಯುದ್ಧದ ಅನಂತರ ಇಂಗ್ಲೆಂಡಿಗೆ ಅನ್ವಯಿಸುವಂತೆ ಸ್ವಾತಂತ್ರ್ಯ ಸಮಾಜದಲ್ಲಿ ಪೂರ್ಣೋದ್ಯೋಗ ಎಂಬ ಯೋಜನೆಯನ್ನು ವಿಲಿಯಂ ಬೆವರಿಜ್ ಸಿದ್ಧಗೊಳಿಸಿದರು. ಇದು ಈ ದಿಶೆಯಲ್ಲಿ ಇತರ ದೇಶಗಳಿಗೂ ಮಾರ್ಗದರ್ಶಕವಾಯಿತು. ಆರ್ಥಿಕ ಏರುಪೇರುಗಳನ್ನು ಪೂರ್ಣವಾಗಿ ತಪ್ಪಿಸಲಾಗದಿದ್ದರೂ ಅವನ್ನು ಸೂಕ್ತ ಪೂರ್ವಭಾವಿ ಕಾರ್ಯಕ್ರಮಗಳ ಮೂಲಕ ತಡೆಗಟ್ಟಬಹುದೆಂಬ ವಿಶ್ವಾಸ ಮೂಡಿದೆ. ಇದಕ್ಕಾಗಿ ಸರ್ಕಾರ ಸೂಕ್ತ ಹಣಕಾಸಿನ ಮತ್ತು ತೆರಿಗೆಯ ನೀತಿಯನ್ನೂ ಸಾರ್ವಜನಿಕ ಕಾಮಗಾರಿ ನೀತಿಯನ್ನೂ ಸಮಯವರಿತು 

ಉಪಯೋಗಿಸಿಕೊಳ್ಳಬಹುದೆಂದು ವಾದಿಸಲಾಗಿದೆ. ಹೀಗೆ ಸುಧಾರಿತ ಬಂಡವಾಳವಾದಿ ವ್ಯವಸ್ಥೆಯಲ್ಲಿ ಖಾಸಗಿ ಉದ್ಯಮಕ್ಕೆ ಪೋಷಕವಾಗಿ ಸರ್ಕಾರ ಆರ್ಥಿಕ ಕ್ಷೇತ್ರದಲ್ಲಿ ಭಾಗವಹಿಸುವುದು. ಈ ಬಗೆಯ ಆರ್ಥಿಕ ವ್ಯವಸ್ಥೆಯನ್ನು ಮಿಶ್ರ ಆರ್ಥಿಕತೆಯೆಂದೂ ಕರೆಯಲಾಗಿದೆ. ಅಭಿವೃದ್ಧಿಹೊಂದದ ದೇಶಗಳ ಶೀಘ್ರ ಅಭಿವೃದ್ಧಿಸಾಧನೆಗೆ ಸರ್ಕಾರಿ ಉದ್ಯಮ ವಲಯಪ್ರಧಾನವಾದ ಪ್ರಯೋಗಗಳನ್ನು ಮಾಡಲಾಗಿದೆ. ಖಾಸಗಿ ಉದ್ಯಮ ವಲಯದಲ್ಲಿ ಸಾಕಷ್ಟು ಬಂಡವಾಳ ಶೇಖರಣೆ ಆಗದಿರುವುದರಿಂದ ಇಲ್ಲಿ ಸರ್ಕಾರಿ ಉದ್ಯಮ ವಲಯದ ಬೆಳವಣಿಗೆ ಅನಿವಾರ್ಯ ಹಾಗೂ ಅಗತ್ಯ ಎನ್ನಲಾಗಿದೆ. 
										(ಕೆ.ಎನ್.ಎಂ.)
								(ಪರಿಷ್ಕರಣೆ: ಬಿ.ಎಸ್.ಶ್ರೀಕಂಠಾರಾಧ್ಯ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ